ಬೌದ್ಧ ಧರ್ಮ -
ಭಗವಾನ್ ಬುದ್ಧ ಬೋಧಿಸಿದ ಧರ್ಮ. ಭಾರತೀಯ ದರ್ಶನಗಳು ಜಿಜ್ಞಾಸೆಯ ಬಲದಿಂದಲೇ ಬಂದ ವಿಚಾರಗಳಲ್ಲ: ಜೀವನದ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹರಿಸಿಕೊಳ್ಳಲು ಚಿತ್ತಸ್ಥೈರ್ಯ ಹಾಗೂ ಚಿತ್ತಶುದ್ಧಿಯ ಮಾರ್ಗ ಹುಡುಕುವ ಕಾತರದಿಂದ ಎದ್ದುಬಂದವು. ಈ ಮಾತಿಗೆ ಉತ್ತಮ ನಿದರ್ಶನ ಬೌದ್ಧಧರ್ಮ. ಜೀವನದಲ್ಲಿ ಅನಿವಾರ್ಯವಾಗಿ ಒದಗುವ ದುಃಖಕ್ಕೆ ಕಾರಣ ಹುಡುಕಿ, ಅದನ್ನು ಕಿತ್ತು ಬಿಸುಟು ಕಾರ್ಯ ಇಲ್ಲದಂತೆ ಮಾಡುವುದೇ ಬೌದ್ಧಧರ್ಮದ ಗೊತ್ತುಗುರಿ. ಈ ಧರ್ಮದ ಪ್ರವರ್ತಕ ಶಾಕ್ಯ ಮುನಿ ಬುದ್ಧನಿಗೇ ಬಾಳಿದ ಸಮಸ್ಯೆಗಳ ಒತ್ತಡ ಅತಿಯಾಗಿ, ತನಗೆ ಮಾತ್ರವಲ್ಲದೆ ಲೋಕದ ಎಲ್ಲಜನರಿಗೂ ಪರಿಹಾರ ಮಾರ್ಗ ಹುಡುಕಿಕೊಂಡಲೆಂದೇ ಆತನ ತಪಶ್ಚರ್ಯೆ ಆರಂಭವಾಯಿತೆಂದು ಸಂಪ್ರದಾಯ ಹೇಳುತ್ತದೆ. ದುಃಖದರ್ಶನದಿಂದಲೆ ಬೌದ್ಧದರ್ಶನದ ಪ್ರಥಮ ಪರಿಚ್ಛೇದ ಅಂಕುರವಾಯಿತು: ಪ್ರವರ್ತಕ ತೀರಿಕೊಂಡು ಅನುಯಾಯಿಗಳು ತತ್ತ್ವನಿಶ್ಚಯ ಮಾಡಲು ಹೊರಟಾಗ ಮೂರನೆಯ ಪರಿಚ್ಚೇದ ಉಗಮವಾಯಿತು.

ಬೌದ್ಧಧರ್ಮಕ್ಕೆ ಹಿನ್ನೆಲೆಯಾಗಿ ವೈದಿಕಸಂಸ್ಕøತಿಯಿದೆ. ಬುದ್ಧನ ಉದಯವಾಗುವಷ್ಟರಲ್ಲೇ ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತುಗಳು ಸಿದ್ಧವಾಗಿದ್ದುವು. ಸಾಂಖ್ಯದರ್ಶನವೂ ಯೋಗಪದ್ಧತಿಯೂ ಪ್ರಚಲಿತವಾಗಿದ್ದುವು. ವಿವಿಧಮತಗಳನ್ನು ಅನುಸರಿಸುತ್ತಿದ್ದ ತೀರ್ಥಂಕರರೂ ಪರಿವ್ರಾಜಕರು ನಾಡಿನ ತುಂಬ ಇದ್ದರು. ಮಕ್ಕಲಿಗೋಸಾಲನೆಂಬ ಆಜೀವಿಕನೂ ಸಂಜಯಬೆಲಟ್ಠಿ ಪುತ್ತು ಕಕುದಚ್ಚಾನ ಮುಂತಾದ ಗಣಾಚಾರ್ಯರೂ ದೊಡ್ಡ ದೊಡ್ಡ ಸಂಘಗಳನ್ನು ವ್ಯವಸ್ಥೆಮಾಡಿಕೊಂಡು ತಂತಮ್ಮ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದರು. ಯೋಗ, ಸಾಂಖ್ಯದರ್ಶನಗಳು ಪ್ರಯೋಗದಲ್ಲಿದ್ದುವು. ಅಂಕಿಚನಙÁಯತನ ಬೋಧಿಸುತ್ತಿದ್ದ ಆರಾಡ ಕಾಲಾಮ. ನೇವಸುಙÁಯತನವನ್ನು ಬೋಧಿಸುತ್ತಿದ್ದ ಉದ್ದಕರಾಮಪುತ್ತ ಇವರು ಹೆಸರಾಂತ ಯೋಗಿಗಳಾಗಿದ್ದರು. ಕಪಿಲವಸ್ತುವಿನಲ್ಲಿ ಶಾಕ್ಯಪುತ್ರನಾಗಿ ಹುಟ್ಟಿದ ಗೌತಮ ದುಃಖದರ್ಶನದಿಂದ ಮನೆಬಿಟ್ಟು ಹೊರಟು ಪರಿವ್ರಾಜಕನಾದಾಗ ಮೊದಲು ಈ ಇಬ್ಬರು ಯೋಗಿಗಳ ಬಳಿ ಹೋಗಿ, ಕೆಲಕಾಲ ಅವರಲ್ಲಿ ನಿಂತು, ಅವರ ಸಮಾಪತ್ತಿಗಳನ್ನೆಲ್ಲ ತಾನೂ ಪಡೆದ. ಆದರೂ ತಾನು ಬಯಸುತ್ತಿದ್ದ ಪರಮಾಭಿಸಂಬೋಧಿ ಅಥವಾ ನಿರ್ವಾಣ ಕೈಗೂಡಲಿಲ್ಲವಾಗಿ ಅವರನ್ನು ಬಿಟ್ಟು ಉರುವಿಲ್ಲದ ಕಾಡಿನಲ್ಲಿ ತಾನೇ ಕಠೋರವಾದ ತಪಶ್ಚರ್ಯೆಗೆ ಆರಂಭಿಸಿದ. ಏಳು ವರ್ಷಗಳ ನಿಷ್ಠೆಯ ತಪಸ್ಸಿನ ಫಲವಾಗಿ ಅವನಿಗೆ ಸಂಬೋಧಿ ಒದಗಿತು. ಅಲ್ಲಿಂದ ಮುಂದೆ ಬುದ್ಧನೆನಿಸಿಕೊಂಡ. ತನ್ನ ಸಂಬೋಧಿಯ ತಾತ್ಪರ್ಯ ಜಗತ್ತಿಗೆ ತಿಳಿಸಿ ಎಂಬತ್ತನೆಯ ವಯಸ್ಸಿನಲ್ಲಿ, ಕ್ರಿ.ಪೂ.493ರಲ್ಲಿ ತೀರಿಕೊಂಡ.

	ಬುದ್ಧ ಬದುಕಿದ್ದ ಅವಧಿಯಲ್ಲಿ ಮಾಡಿದ ಪ್ರವಚನಗಳಿಂದ ಸಾವಿರಾರು ಮಂದಿ ಪ್ರತಿಭಾವಂತರು ಆತನ ಬಳಿ ಭಿಕ್ಷುಗಳಾಗಿ ಸೇರಿದರು. ಈ ಕೂಟಕ್ಕೆ ದೇಶ, ಕುಲದ ನಿರ್ದೇಶವಿರಲಿಲ್ಲ. ಪ್ರವ್ರಜಿತರಾದ ಶ್ರವಣರು ಶಾಕ್ಯಪುತ್ರ ಶ್ರವಣರೆಂದೂ ಗೋತಮ ಸಂಘದವರೆಂದೂ ಹೆಸರಾಯಿತು. ಅವರ ನಡತೆಗಳನ್ನು ನೋಡಿಕೊಳ್ಳುವುದಕ್ಕೆ ನಿಯಮಾವಳಿಯಾಗಲೀ ನಾಯಕನಾಗಲೀ ಇರಲಿಲ್ಲ. ಪ್ರವ್ರಜ್ಯದ ಕಾಲದಲ್ಲಿ ಸಿದ್ದವಾದ ಪ್ರಾತಿಮೋಕ್ಷವೊಂದೇ ಅವರ ಸಂವರವಾಗಿತ್ತು. ಬುದ್ಧನ ಅದ್ಭುತ ವ್ಯಕ್ತಿತ್ವ ಈ ಚಾತುದ್ದಿಸಭಿಕ್ಖುಸಂಘವನ್ನು ಹಿಡಿದು ನಿಲ್ಲಿಸಿತ್ತು. ಆದರೆ ಬುದ್ದ ತೀರಿಕೊಂಡೊಡನೇ ಸಂಘ ಒಡೆಯದಂತೆ ತಡೆಗಟ್ಟಲು ವಿಧಿ ನಿಷೇಧಗಳನ್ನು ಕಟ್ಟಳೆಗಳನ್ನು ನಿರ್ದೇಶನಮಾಡುವ ಅಗತ್ಯ ಒದಗಿತು. ಆತನ ಶಿಷ್ಯರಿಗೆ ಸತ್ಥಾ (ಗುರು), ಧರ್ಮ, ಸಂಘ ಮತ್ತು ಸಿಕ್ಖಾ (ಶಿಕ್ಷೆ, ಪಾಠ) ಹೀಗೆ ನಾಲ್ಕು ಆದರಣೀಯ ವಿವರಗಳು ಉಂಟಾದುವು. ಬುದ್ಧ ತೀರಿಕೊಂಡ ವರ್ಷವೇ ರಾಜಗೃಹದಲ್ಲಿ ಆತನ ಶಿಷ್ಯರೆಲ್ಲ ಸೇರಿ ಮೊದಲ ಸಂಗೀತಿ ವ್ಯವಸ್ಥೆಮಾಡಿದರು. ಇದರಲ್ಲಿ ಸಂಘಜೀವಿಗಳ ನಿಯಮಾವಳಿ ಬುದ್ಧನ ಆದೇಶದಂತೆಯೇ ಸಿದ್ಧವಾಯಿತು (ವಿನಯಪಿಟಕ); ಧರ್ಮದ ವಿವರಗಳು ಬುದ್ಧನಮಾತಿನಲ್ಲೇ ಸಂಗೃಹೀತವಾದುವು (ಸೂತ್ರಪಿಟಕ); ಧರ್ಮದ ಆಧಾರವಾಗಿ ಉಳಿದ ತತ್ತ್ವದ ಗಹನ ವಿಚಾರಗಳನ್ನು ಮೂರನೆಯ ಪಿಟಕದಲ್ಲಿ ಕೂಡಿಸಿದರು (ಅಭಿಧಮ್ಮ ಪಿಟಕ). ಹೀಗೆ ರಾಜಗೃಹದ ಪ್ರಥಮ ಭಿಕ್ಷುಸಂಗೀತಿಯಲ್ಲಿ ರೂಪತಳೆದ ತ್ರಿಪಿಟವಾಙ್ಮಯವೇ ಬೌದ್ಧಧರ್ಮದ ದೇಹವಾಯಿತು. ಪ್ರವರ್ತಕನಾಗಿ ಶಾಕ್ಯಪುತ್ರ ಬುದ್ಧನೇ ಸ್ಮರಣೆಯಲ್ಲಿ ಉಳಿದ (ಸತ್ಥಾ, ಶಾಸ್ತø). ಅವನ ಅನುಯಾಯಿಗಳೆಲ್ಲ ಸೇರಿದ ಒಕ್ಕೂಟ (ಸಂಘ), ಈ ಒಕ್ಕೂಟಕ್ಕೆ ಆಸರೆ, ಆಧಾರವಾಗಿ ನಿರ್ಮಿತವಾದದ್ದು ಧರ್ಮ ಇದಕ್ಕೆ ಊರುಗೋಲಾಗಿ ಗುರುವಿನ ಉಪದೇಶ (ಸಿಕ್ಖಾ, ಶಿಕ್ಷೆ), ಈ ನಾಲ್ಕರಿಂದ ಬೌದ್ಧಧರ್ಮ ನಿರ್ದಿಷ್ಟವಾಯಿತು. ಬುದ್ಧನೇ ಗುರುವೆಂದು ಒಪ್ಪಿ, ದೇಶವನ್ನೇ ನಂಬಿ ಬಾಳಿದ ಭಿಕ್ಷುಗಳು ಉಳಿದ ಭಿಕ್ಷುಗಳಿಂದ ಪ್ರತ್ಯೇಕವಾದ ಒಂದು ಗಣವಾದರು. ಇವರ ನಡತೆಯನ್ನು ಮೆಚ್ಚಿಕೊಂಡು, ಇವರಿಂದ ಬುದ್ಧನ ಉಪದೇಶಗ್ರಹಿಸಿ ಅವನ್ನು ತಮ್ಮ ಬಾಳುವೆಗಳಲ್ಲಿ ಅಳವಡಿಸಿಕೊಳ್ಳಲು ಸಿದ್ಧರಾದ ಮಂದಿ ಮನೆಯಿಲ್ಲದ ಈ ಭಿಕ್ಷುಗಳನ್ನು ಸತ್ಕರಿಸಿ ಅವರಿಂದ ದೀಕ್ಷೆ ಪಡೆದು ಬೌದ್ಧಗೃಹಸ್ಥರಾದರು. ಮೊದಲಿಗೆ ಬೌದ್ಧಧರ್ಮ ಭಿಕ್ಷೆಗಳಿಗೆ ಮಾತ್ರ ಸೀಮಿತವಾಗಿತ್ತು. ಕಾಲಕ್ರಮದಲ್ಲಿ ಇದು ನಿಷ್ಠೆಯ ನೆಪದಿಂದ ವ್ಯವಹಾರದಲ್ಲಿ ಪ್ರಸಕ್ತರಾದ ಜನರಿಗೂ ಹರಡಿತು. ಆದರೆ ಭಿಕ್ಷುಗಳಲ್ಲದವರಿಗೆ ಸಂಘದ ವಿಧಿ ನಿಷೇಧಗಳು ಅನ್ವಯವಾಗುವುದಿಲ್ಲ. ಅವರಿಗಾಗಿ ಬೇರೆ ಸಾಮಾನ್ಯಶೀಲಗಳು ಸಿದ್ಧವಾದುವು. ಅವರ ಪಾಲಿಗೆ ಬುದ್ಧ, ಧರ್ಮ, ಸಂಘ (ಶ್ರಾವಕಸಂಘ, ಭಿಕ್ಷುಸಮೂಹ) ಈ ಮೂರೂ ಮಾನ್ಯವಾದವು (ಅಗ್ಗದಕ್ಖಿಣೇಯ್ಯ). ತಮ್ಮ ಜೀವನವನ್ನು ಚೊಕ್ಕ ಮಾಡಿಕೊಳ್ಳಲು ಈ ಮೂರರಲ್ಲಿ ಶರಣುಹೋಗಬೇಕೆಂಬ ಪದ್ಧತಿ ಬೆಳೆದುಬಂದಿತು. ಇದು ಇಂದು ಸರಣಗಮನವೆನಿಸಿಕೊಳ್ಳುತ್ತದೆ. ಬೌದ್ಧ್ದಮತದ ದೀಕೆಯುಳ್ಳವರು ಬುದ್ಧಂ ಸರಣಂ ಗಚ್ಛಾಮಿ, ಧಮ್ಮಂ ಸರಣಂ ಗಚ್ಛಾಮಿ, ಸಂಘಂ ಸರಣಂ ಗಚ್ಛಾಮಿ ಎಂದು ಮೂರಾವರ್ತಿ ದಿನವೂ ಜ್ಞಾಪಿಸಿಕೊಳ್ಳುತ್ತಾರೆ. ಈ ಮೂರರಲ್ಲಿಯೂ ಆತ್ಮಸಮರ್ಪಣೆ (ಅತ್ತಸನ್ನಿಯ್ಯಾತನ) ಮಾಡಿಕೊಳ್ಳುವುದು, ಅವುಗಳಲ್ಲೇ ಮನಸ್ಸನ್ನು ನಿಲ್ಲಿಸುವುದು (ತಪ್ಪರಾಯನ), ಶಿಷ್ಯಭಾವದಿಂದ ಅವನ್ನು ಕಾಣುವುದು (ಸಿಸ್ನಭಾವೂಪಗಮನ) ಮತ್ತು ಅವುಗಳಿಗೆ ಸನ್ಮಾನ ಮಾಡುವುದು (ಪಣಿಪಾತ) ಸರಣಗಮನದ ತಾತ್ಪರ್ಯ. ಅವನ್ನು ರತ್ನತ್ರಯವೆಂದು ವ್ಯವಹರಿಸುತ್ತಾರೆ.

	ಬೌದ್ಧಧರ್ಮದ ಜಿಜ್ಞಾಸೆಯ ಸಲುವಾಗಿ ಬೌದ್ಧಿಕವಾದ ಒಂದು ದೃಷ್ಟಿ (ದಿಟ್ಠಿ)ಯೂ ಉಂಟು; ಚಿತ್ತಶುದ್ಧಿಗಾಗಿ ಮಾರ್ಗವೂ (ಪಟಿಪದ) ಉಂಟು. ಈ ಎರಡೂ ಧರ್ಮದ ಇಕ್ಕೆಲಗಳೆಂದು ಮಹಾನಿದ್ದೇಸ ಬಣ್ಣಿಸುತ್ತದೆ. ಎರಡಕ್ಕೂ ಸಮನ್ವಯ ಮಾಡುವ ಸಲುವಾಗಿ ಎರಡನ್ನೂ ಒಳಗೊಂಡ ಶಾಸನ ಸಿದ್ಧವಾಯಿತು (ಇಮಸ್ಮಿಂ ಸಾಸನೇ, ಇಮಸ್ಮಿಂ ಧಮ್ಮವಿನಯೇ). ಈ ಶಾಸನದಲ್ಲಿ ಮೂರು ಬಗೆಗಳು. ಮೊದಲನೆಯದು ಬುದ್ಧನ ಮಾತುಗಳನ್ನು ಕೇಳಿ ಮನನಮಾಡಿ. ಅರ್ಥಮಾಡಿಕೊಳ್ಳುವುದು (ಪರಿಯತ್ತಿಸಾಸನ); ಎರಡನೆಯದು ಬುದ್ಧ ತೋರಿಸಿದ ದಾರಿಯಲ್ಲಿ ನಡೆದು ಆತ ಪಡೆದ ಸಿದ್ದಿಗಳನ್ನು ಪಡೆಯುವುದು (ಪಟಿಪತ್ತಿಸಾಸನ); ಮೂರನೆಯದು ಬುದ್ಧವಚನ ಮಾರ್ಗಗಳೆರಡಕ್ಕೂ ಮೂಲಭೂತವಾದ ತತ್ತ್ವವನ್ನು ಒಳಹೊಕ್ಕು ಸಾಕ್ಷಾತ್ಕರಿಸಿಕೊಳ್ಳವುದು (ಪಟವೇಶ-ಸಾಸನ) ಶಾಸನವೆಂಬ ಪದವನ್ನು ಬುದ್ಧವಚನವೆಲ್ಲಕ್ಕೂ ಕೆಲವುವೇಳೆ ಅನ್ವಯಿಸುತ್ತಾರೆ. ನಿದರ್ಶನಕ್ಕೆ ಸುತ್ತ, ಗೆಯ್ಯ, ವ್ಯಾಕರಣ, ಗಾಥಾ, ಉದಾನ, ಇತಿವುತ್ತಕ, ಜಾತಕ, ಅಬ್ಛುತ-ಧಮ್ಮ ಮತ್ತು ವೇದಲ್ಲ-ಈ ಒಂಬತ್ತು ಬಗೆಯ ತ್ರಿಪಿಟಕವಾಙ್ಮಯಕ್ಕೆ ನವಂಗಬುದ್ಧಸಾಸನವೆಂದು ಹೆಸರು. ಮೇಲೆ ಹೇಳಿದ ಅರ್ಥದಲ್ಲಿ ಶಾಸನವನ್ನು ಶಿಕ್ಷೆ (ಸಿಕ್ಖ) ಎಂದು ವ್ಯವಹರಿಸುತ್ತಾರೆ. ಈ ಶಿಕ್ಷಣ ಮೂರುಬಗೆ ಎಂದು ಸಂಪ್ರದಾಯ ಹೇಳುತ್ತದೆ. ದಿನದಿನದ ನಡತೆಯನ್ನು ಚೊಕ್ಕಮಾಡಿಕೊಳ್ಳವುದು ಅಧಿಸೀಲ ಸಿಕ್ಖಾ; ಹರಿಯುವ ಮನಸ್ಸನ್ನು ಬಿಗಿಹಿಡಿದು ಅದರ ಕ್ಲೇಶಗಳನ್ನು ಕಳಚಿ ಒಗೆದು ತೊಳೆಯುವುದು ಅಧಿಚಿತ್ತಸಿಕ್ಖಾ; ಪ್ರಜ್ಞೆಯನ್ನು ಉದ್ಬೋಧನೆ ಮಾಡಿ ಅದರಿಂದ ಯಥಾರ್ಥಜ್ಞಾನ ಪಡೆದು ಮುಕ್ತರಾಗುವುದು ಅಧಿಪ್ಞಾಙ ಸಿಕ್ಖಾ. ಶೀಲ ಆಧಾರ; ಚಿತ್ತ ಸಾಧನ; ಪ್ರಜ್ಞೆ ತಾರಕ-ಈ ಮೂರೂ ಸೇರಿದರೆ ಅದು ವಿಶುದ್ಧಿಮಾರ್ಗ ಎನಿಸಿಕೊಳ್ಳುತ್ತದೆ (ಎಸ ಮಗ್ಗೋ ವಿಸುದ್ದಿಯಾ). ಬೌದ್ಧಧರ್ಮಕ್ಕೆ ವಿಶುದ್ಧಿಮಾರ್ಗ ಪರ್ಯಾಯಪದ.

	ಬೌದ್ಧಧರ್ಮದಲ್ಲಿ ದೃಷ್ಟಿ ಶಾಸನಕ್ಕೆ ಅಥವ ಮಾರ್ಗಕ್ಕೆ ಅಧೀನವಾಗಿರುವುದೊಂದು ವಿಶೇಷ. ಪ್ರಮುಖವಾಗಿ ಬೌದ್ಧಧರ್ಮವೆಂದರೆ ಉದ್ಯಮ, ಸಾಧನೆ; ಮನಸ್ಸಿನಿಂದ ತತ್ತ್ವವನ್ನು ಗ್ರಹಿಸುವುದಕ್ಕಿಂತ ಮನಸ್ಸನ್ನೇ ಬಿಗಿಹಿಡಿದು ಅದರ ನಿರೋಧದಿಂದ ಒದಗುವ ಶಾಂತಿಯ ಸುಖವನ್ನು ಅನುಭವಿಸುವುದು ಹೆಚ್ಚಿನದು. ಬೌದ್ದರು ಬುದ್ಧ ಹೇಳಿದ ಧರ್ಮ ವರ್ಣಿಸುವಾಗ ಸನ್ದಿಟ್ಠಿಕೋ (ಈ ಜನ್ಮದಲ್ಲೇ ಫಲಿಸುವಂಥದು), ಅಕಾಲಿಕೋ (ಬೇಗನೇ ಫಲಿಸುವಂಥದು), ಏಹಿಪಸ್ಸಿಕೋ (ಬಂದುನೋಡಿ ಅನುಭವಿಸತಕ್ಕದ್ದು) ಓಪನಯಿಕೋ (ಗುರಿಮುಟ್ಟಿಸತಕ್ಕದ್ದು), ಮತ್ತು ಪಚ್ಚತ್ತಂ ವೇದಿತಬ್ಬೋ ವಿಙ್ಜೂಹಿ (ಒಬ್ಬೊಬ್ಬರೂ ತಂತಮ್ಮ ಅನುಭವದಿಂದಲೇ ತಿಳಿಯತಕ್ಕದ್ದು) ಎಂಬ ಮಾತುಗಳನ್ನು ಉಪಯೋಗಿಸುತ್ತಾರೆ. ತತ್ತ್ವವನ್ನು ಅನುಭವದಿಂದ ಅಥವಾ ಗುರುಮುಖೇನ ಅಥವಾ ಶಾಸ್ತ್ರವ್ಯವಸಾಯದಿಂದ ತಿಳಿಯುವುದು ಮೊದಲ ಹೆಜ್ಜೆ; ಕರ್ತವ್ಯವೇನೆಂಬುದನ್ನು ಅರಿಯುವುದು ಎರಡನೆಯ ಹೆಜ್ಜೆ, ಅದನ್ನು ಮಾಡಿ ಕೃತಾರ್ಥರಾಗುವುದು ಮೂರನೆಯ ಹೆಜ್ಜೆ. ಮೊದಲನೆಯದು ಉಳಿದ ಎರಡಕ್ಕೆ ಸಹಕಾರಿಯಾಗಿ ನಿಲ್ಲಬೇಕಷ್ಟೆ. ಪಾಳಿ ಪರಿಭಾಷೆಯಲ್ಲಿ ಈ ಮೂರನ್ನು ಸಚ್ಚ (ಸತ್ಯ), ಕಿಚ್ಚ (ಮಾಡುವಕೆಲಸ) ಮತ್ತು ಕತ (ಮಾಡಿದ ಕೆಲಸ) ಎಂದು ನಿರ್ದೇಶಿಸುತ್ತಾರೆ.

	ಈ ವಿಭಾಗ ಬುದ್ಧಮೊತ್ತಮೊದಲು ಉಪದೇಶಿಸಿದ ಧರ್ಮಚಕ್ರ ಪ್ರವರ್ತನ ಸೂತ್ರದಲ್ಲಿ ಬಂದಿದೆ. ಈ ಸೂತ್ರವೇ ಬೌದ್ಧಧರ್ಮದ ರೂಪುರೇಷೆಗಳನ್ನು ನಿರೂಪಣೆಮಾಡಿದೆ. ಇದರಲ್ಲಿ ನಾಲ್ಕು ಸತ್ಯಗಳ, ಮೂರು ಸ್ಥಿತಿಗಳ ಮಧ್ಯ ಮಾರ್ಗದ ಪ್ರಸ್ತಾಪವಿದೆ. ದುಃಖ, ದುಃಖಸಮ ದಯ, ದುಃಖನಿರೋಧ, ದುಃಖನಿರೋಧಗಾಮಿನೀ ಪಟಿಪದಾ ಈ ನಾಲ್ಕು ಅರ್ಯಸತ್ಯಗಳನ್ನು ಮೂರು ಸ್ಥಿತಿಗಳಲ್ಲಿ ಅರಿತು ಸಾಧಿಸಿದರೆ ಹನ್ನೆರಡು ಪ್ರಕಾರಗಳು ಸಿದ್ಧವಾಗುತ್ತವೆ; ಇದನ್ನು ತ್ರಿಪರಿವರ್ತದ ದ್ವಾದಶಾಕಾರದ ಧರ್ಮಚಕ್ರವೆಂದು ಬಣ್ಣಿಸುತ್ತಾರೆ. ಮೊದಲನೆಯದು ಪರಿವರ್ತ ಸಚ್ಚ, ಎರಡನೆಯದು ಕಿಚ್ಚ, ಮೂರನೆಯದು ಕತ-

ಸತ್ಯ	ಮೊದಲ ಪರಿವರ್ತ	ಎರಡನೆಯ ಪರಿವರ್ತ	ಮೂರನೆಯ ಪರಿವರ್ತ
1	ದುಃಖ	ಪರಿಙಯ್ಯ (ತಿಳಿಯ ಬೇಕಾದುದು)	ಪರಿಜಾತ (ತಿಳಿದುದು)
2	ದುಃಖ ಸಮುದಯ	ಪಹಾತಬ್ಬ (ನೀಗಿಸ ಬೇಕಾದುದು)	ಪಹಾತಬ್ಬ (ನೀಗಿಸಿದುದು)
3	ದುಃಖ ನಿರೋಧ	ಸಚ್ಚಿಕಾತಬ್ಬ (ಸಾಕ್ಷಾತ್ಕರಿಸಿಕೊಳ್ಳ ಬೇಕಾದುದು)	ಸಚ್ಚಿಕತ (ಸಾಕ್ಷಾತ್ಕರಿಸಿ ಕೊಂಡ)
4	ಪಟಿಪದಾ	ಭಾವೇತಬ್ಬ (ಮಾಡಬೇಕಾದುದು)	ಭಾವಿತ (ಮಾಡಿದುದು)

	ಈ ನಾಲ್ಕು ಸತ್ಯಗಳನ್ನು ಆರ್ಯಸತ್ಯಗಳೆಂದು ವ್ಯವಹರಿಸುವುದರಲ್ಲಿ ಔಚಿತ್ಯವಿದೆ. ಆರ್ಯ ಎಂದರೆ ನಿರ್ವಿವಾದವಾದುದು ಎಂದರ್ಥವೆಂದು (ಅವಿಸಂವಾದಕಾನಿ) ಪಾಳಿ ಟೀಕಾಕಾರರು ಹೇಳುತ್ತಾರೆ. ಇವಕ್ಕೆ ಬುದ್ಧಸತ್ಯಗಳೆಂದು (ಅರಿಯಸ್ಸ ಸಚ್ಚಾನಿ) ಇನ್ನೊಂದರ್ಥ. ವಾಚಾಸತ್ಯ, ವಿರತಿಸತ್ಯ, ಸೃಷ್ಟಿಸತ್ಯಗಳಿಂದ ಪೃಥಕ್ಕರಿಸಲು ಇವನ್ನು ಆರ್ಯಸತ್ಯಗಳೆಂದರು. ಈ ನಾಲ್ಕು ಸತ್ಯಗಳನ್ನು ಪದ-ಅರ್ಥದಿಂದ (ವಚನತ್ಥತೋ) ಲಕ್ಷಣಗಳಿಂದ (ಲಕ್ಖಣತೋ), ಕ್ರಮನಿರೂಪಣೆಯಿಂದ (ಕಮತೋ), ಅವುಗಳ ವೈವಿಧ್ಯದಿಂದ (ನಾನತ್ತತೋ), ವಿಭಾಗಗಳಿಂದ (ಕಮವಿತ್ಥಾರತೋ), ಸಂಕ್ಷೇಪದಿಂದ (ಸಂಖೇಪತೋ), ಭೇದಗಳಿಂದ (ಪರಿಚ್ಛೇದತೋ) ಗಣನೆಯಿಂದ (ಗಣನತೋ). ಏಕತ್ವದಿಂದ (ಏಕತ್ತತೋ), ಸಂಗ್ರಹದಿಂದ (ಸುಗಹತೋ) ತಿಳಿಯಬೇಕೆಂದು ವ್ಯಾಖ್ಯಾನಕಾರ ಬುದ್ಧಘೋಷಾಚಾರ್ಯ ಹೇಳುತ್ತಾನೆ.

	ಮೊದಲ ಮೂರು ಸತ್ಯಗಳು ಜ್ಞಾನಕ್ಕೆ ಸಂಬಂಧಿಸಿದವು. ಸಂಸಾರದ ಪರಾಮರ್ಶೆಯಿಂದ ಪ್ರವೃತ್ತಿಗಳನ್ನು ಶುದ್ದಗೊಳಿಸಿ ಸಂಕಲ್ಪ ಸ್ಥಿರಪಡಿಸಿಕೊಳ್ಳಲು ಈ ಜ್ಞಾನದ ಅಗತ್ಯವಿದೆ. ಅಭಿದಮ್ಮ ಇದಕ್ಕೆ ಸಹಕಾರಿಯಾಗುತ್ತದೆ. ದುಃಖದ ವಿಶ್ಲೇಷಣೆಯಲ್ಲಿ ಬುದ್ಧ ಕಂಡುಕೊಂಡ ತತ್ತ್ವವೆಂದರೆ ಯಾವುದು ಉತ್ಪನ್ನವಾಗಿದೆಯೋ ಅದು ನಿರೋಧವೂ ಆಗುತ್ತದೆ (ಯಂ ಕಿಂಚಿ ಸೂದಯಧಮ್ಮಂ ಸಬ್ಬಂ ತಂ ನಿರೋಧಧಮ್ಮಂ) ಎಂಬುದು. ದುಃಖ ಪ್ರವೃತ್ತವಾಗಿದ್ದರೆ ಅದಕ್ಕೆ ಕಾರಣವಿದ್ದೇ ಇರಬೇಕು; ಕಾರಣದಿಂದ ದುಃಖ ಉಂಟಾಗಿದ್ದರೆ ಕಾರಣವನ್ನು ಕಳೆದರೆ ಕಾರ್ಯವಾದ ದುಃಖವೂ ಕಳೆಯಬೇಕು. ದುಃಖ ನಿಜವಾದರೆ ದುಃಖದ ಸಮುದಾಯವೂ ನಿಜವೇ, ದುಃಖ ನಿರೋಧ ಸಾಧ್ಯವೆಂಬುದೂ ನಿಜವೇ. ಈ ತತ್ತ್ವದರ್ಶನದಿಂದ ಬೌದ್ಧದರ್ಶನಕ್ಕೆ ವಿಶಿಷ್ಟವಾದ ಕ್ಷಣಿಕವಾದ (ಅನಿತ್ಯತಾವಾದ) ಮತ್ತು ಅನಾತ್ಮವಾದ (ನೈರಾತ್ಮವಾದ) ಇವು ಪ್ರಸ್ತುತವಾಗುತ್ತವೆ. ದುಃಖ, ಅನಿತ್ಯ, ಅನಾತ್ಮ ಇವು ಬೌದ್ಧದರ್ಶನದ ತತ್ತ್ವತ್ರಯಗಳು. ಮನುಷ್ಯನೂ ವಿಶ್ವದಂತೆ ಸಂಘಾತ ತತ್ತ್ವವೇ; ರೂಪ, ವೇದನಾ, ಸಂಜ್ಞಾನ, ಸಂಸ್ಕಾರ, ವಿಜ್ಞಾನಗಳೆಂಬ ಪಂಚ ಸ್ಕಂಧಗಳ ಸಮುದಯವೇ ಮನುಷ್ಯ. ಈ ಐದನ್ನು ಬಿಟ್ಟು ಆರನೆಯದಾದ ಆತ್ಮ ಅಥವಾ ಚೈತನ್ಯ ಇದೆಯೆಂಬುದಕ್ಕೆ ಯಾವ ಗಮಕವೂ ಇಲ್ಲ.

	ಈ ಐದು ಸ್ಕಂಧಗಳು ವ್ಯಕ್ತಿಗತವಾದ ಆರು ಆಯತನಗಳ (ಚಕ್ಷು, ಶ್ರೋತ್ರ, ಪ್ರಾಣ, ಜಿಹ್ವೆ, ಕಾಯ, ಮನಸ್ ಇವಕ್ಕೆ ಪಾಳಿಯಲ್ಲಿ ಅಜ್ಝಯಂತಿಕಾಯನ ಎಂದು ಹೆಸರು) ಮತ್ತು ಹೊರಸಂಸಾರದ ಆರು ಆಯತನಗಳ (ರೂ, ಶಬ್ದ, ಗಂಧ, ರಸ, ಸ್ಪರ್ಶ, ಚಿತ್ತ ಇವಕ್ಕೆ ಬಹಿರಾಯತನ ಎಂದು ಹೆಸರು) ಸಂಬಂಧ ರೂಢಿಸಿದಾಗ ಉಪಾದಾನಸ್ಕಂಧಗಳೆನಿಸಿಕೊಳ್ಳುತ್ತವೆ. ಸ್ಕಂಧಗಳು ಉಪಾದಾನಗಳಾಗಿ ಪರಿಣಮಿಸುವುದೇ ಸಂಸಾರದ ಉಗಮ. ಉಪಾದಾನಸ್ಕಂಧಗಳಿಂದ ಉಪಾದಾನದ ಗುಣ ಹೋದರೆ ಅದು ನಿರ್ವಾಣ: ಹೀಗೆ ಶುಷ್ಕವಾದ ಸ್ಕಂದಗಳು ಅಳಿದರೆ ಅದು ಪರಿನಿರ್ವಾಣ. ಶಾಕ್ಯಮುನಿ ಗಯೆಯ ಬೋಧಿವೃಕ್ಷದ ಅಡಿಯಲ್ಲಿ ಕುಳಿತು ಸಂಬೋಧಿ ಪಡೆದಾಗ ನಿರ್ವಾಣ; ಬುದ್ಧನಾಗಿ ಕುಶಿನಾರದಲ್ಲಿ ತೀರಿಕೊಂಡಾಗ ಪರಿನಿರ್ವಾಣ. ಜೀವನ್ಮುಕ್ತಿ, ವಿದೇಹಮುಕ್ತಿಗಳಿದ್ದಂತೆ, ನಿತ್ಯದ ವ್ಯವಹಾರದಲ್ಲಿ ಪಂಚಕಾಮಗುಣಿಕರಾಗದಿಂದ ಉಪಾದಾನಗಳು ವ್ಯವಸ್ಥೆಗೊಳ್ಳತ್ತವೆ. ಹೊರ ಆಯತನದ ವಿವರಗಳನ್ನು ಬಯಸುವಾಗ (ವತ್ಥುಕಾಮ ಮತ್ತು ಅವನು ಅನುಭವಿಸಿ ಆನಂದವನ್ನು ಪಡೆಯಲು ಬಯಸುವಾಗ (ಕಿಲೇಸ ಕಾಮ ವಮಗೆ ಬಯಕೆಗಳ ಆಗು (ಉಸ್ಸಾದ), ಹೋಗು (ನಿಸ್ಸರಣ), ಗತಿ (ಆದೀನವ)ಗಳ ಜ್ಞಾನವಿರುವುದಿಲ್ಲ. ಆತ್ಮವೆಂಬ ವಿಷಯಿಯ ಕಲ್ಪನೆ, ಆತ್ಮದ್ದೆಂಬ (ಅತ್ತನೆಯ) ವಿಷಯಗಳ ಕಲ್ಪನೆ ಎದ್ದು ದುಃಖವನ್ನು ಒದಗಿಸುತ್ತವೆ. ಈ ಸಕ್ರಮವಾದ ದುಃಖಸಮಯವನ್ನು ಬುದ್ಧ ತಾನು ಸಂಬೋಧಿ ಪಡೆದ ರಾತ್ರಿ ಆಶೇಷವಾಗಿ ಅರಿತ. ಇದಕ್ಕೆ ಪ್ರತೀತ್ಯಸಮುತ್ಪಾದ (ಪಟಿಚ್ಚಸಮಷ್ಪಾದ) ಎಂದು ಹೆಸರು. ಇದನ್ನು ದ್ವಾದಶಪರಿಕೆವೆಂದು ಪ್ರತ್ಯಯಾಕಾರವೆಂದು ಬಣ್ಣಿಸುತ್ತಾರೆ. ಹನ್ನೆರಡು ಹೆಜ್ಜೆಗಳಲ್ಲಿ ಒಂದರಿಂದ ಇನ್ನೊಂದು ಬಂದಂತೆ ಪ್ತತೀತ್ಯಸಮುತ್ಪಾದದ ತತ್ತ್ವ. ಅವಿದ್ಯೆ, ಸಂಸ್ಕಾರ, ವಿಜ್ಞಾನ, ನಾಮರೂಪ, ಷಡಾಯತನ, ಸ್ಪರ್ಶ, ವೇದನಾ, ಕೃಷ್ಣಾ ಉಪಾದಾನ, ಭವ, ಜಾತಿ, ಜರಾ ಮರಣಾ-ಇದು ದುಃಖಸ್ಕಂಧದ ಸಮುದಾಯ. ಅವಿದ್ಯೆ ಅಥವಾ ಅಜ್ಞಾನ ಈ ದುಃಖಸಮಯಕ್ಕೆ ಮೂಲಕಾರಣವಾದುದರಿಂದ ಅದನ್ನು ನಿವಾರಿಸಿದರೆ ದುಃಖನಿರೋಧವಾದಂತೆಯೇ ದುಃಖಸಮುದಾಯವನ್ನು ಸ್ಥೂಲವಾಗಿ ಮರುಕಳಿಸುವ ಬಯಕೆ (ಪೋನೋಬ್ಪವಿಕ-ತಣ್ಹ)ಯಿಂದ ವಿವರಿಸಿ ದುಃಖ ನಿರೋಧವನ್ನು ಮುಕ್ತಿಯೆಂದೂ ಅನಾಲಯವೆಂದೂ ಬಣ್ಣಿಸುತ್ತಾರೆ. ಸಂಬೋಧಿಯ ಸಮಯದಲ್ಲಿ ಶಾಕ್ಯಮುನಿಗೆ ಈ ಜ್ಞಾನದರ್ಶನ (ಜಾಣದಸ್ಸನ) ಒದಗಿದಾಗ ತನ್ನ ಚಿತ್ತ ವಿಮುಕ್ತವಾಯಿತೆಂದು (ಮೇ ಚೇತೋ ವಿಮುಕ್ತಿ) ಆತನೇ ಉದಾನ ಒಂದರಲ್ಲಿ ನಿರೂಪಿಸಿದ್ದಾನೆ. ಇದೇ ಅಮೃತಾಧಿಗಮವೆಂದೂ ಬ್ರಹ್ಮ ಚರ್ಯಪರ್ಯವಸಾನವೆಂದೂ ಹೇಳಿದ್ದಾನೆ. ಆತ್ಮದ ಕಲ್ಪನೆ ಇಲ್ಲಿ ಅಳಿಯುತ್ತದೆ (ಸಕ್ಕಾಯನಿರೋಧ). ಲೋಭ, ದ್ವೇಷ, ಮೋಹಗಳ ಗೊಂದಲ ಹರಿದು ತೃಷ್ಣೆಯ ಬಂಧನ ಕಡಿದು ಬೀಳುತ್ತದೆ, ಎಲ್ಲ ಭ್ರಮೆಗಳ (ಮಜ್ಞೆತ) ಅಹಂಕಾರ-ಮಮಕಾರಗಳ, ಮಾನಾಭಿನಿವೇಶದ (ಮಾನಾನುಸಯ) ವಿ-ರಾಗದಿಂದ, ನಿರೋಧರಿಂದ, ತ್ಯಾಗದಿಂದ ವಿಮುಕ್ತನಾದರೆ ಈ ಸಮುದಾಯದ ಅಸ್ತಂಗಮವಾಗುತ್ತದೆ. ಭಾರ ಭಾರ ಹೊತ್ತವ ಭಾರಹೊತ್ತ ಬಗೆ, ಭಾರ ಇಳಿಸುವ ಬಗೆ ಹೇಳುತ್ತೇನೆಂದು ಸಂಯುಕ್ತನಿಕಾಯದ ಖಂದವಗ್ಗದಲ್ಲಿ ಬುದ್ಧವಚನವಿದೆ.

	ಭಾರ ಇಳಿಸುವ ಬಗೆಯೇ ಬೌದ್ಧಧರ್ಮದ ಮುಖ್ಯರಸ. ಇದನ್ನೇ ಮಾರ್ಗವೆಂದೂ ಪ್ರತಿಪದವೆಂದೂ ವ್ಯವಹರಿಸುತ್ತಾರೆ. ಮಧ್ಯಮಾರ್ಗ (ಮಜ್ಝಿಯಾ ಪಟಿಪದಾ)ವನ್ನೇ ತಥಾಗತ ಹೇಳಿದುದೆಂದು ಸಂಪ್ರದಾಯ ಹೇಳುತ್ತದೆ. ಅಶೋಕನ ಶಿಲಾಶಾಸನವೊಂದರಲ್ಲಿ ಮಧ್ಯವನ್ನೇ ಅನುಸರಿಸೋಣ (ಮಧಂ ಪಟಿಪದಯೆಮ) ಎಂಬ ಮಾತಿದೆ. ಮಧ್ಯವೆಂದರೆ ಎರಡು ಕೊನೆಗಳನ್ನೂ ಬಿಟ್ಟು ನಿಂತುದೆಂದರ್ಥ (ಉಭೋ ಅಂತೇ ಅನುಪಗಮ್ಮ). ಕಾಮಸುಖಾನುಯೋಗ ಚಿತ್ತವೃತ್ತಿ ಒಂದು ಕೊನೆ: ಪೃಥಗ್ವನರು ಎಂದರೆ ಸಾಮಾನ್ಯಜನರು ಇದನ್ನು ಅನುಸರಿಸುತ್ತಾರೆ, ಇನ್ನೊಂದು ಕೊನೆ ದೇಹವನ್ನು ದಂಡಿಸಿ ದುಃಖಪಡುವುದು. ಲೋಕವ್ಯಾಪಾರದಲ್ಲಿ ಪ್ರಸಕ್ತರಾಗಿ ವಿಷಯ ಸುಖಗಳನ್ನೆ ಅರಸುತ್ತ ಹೋಗುವ ದಾರಿಯೂ ಅನರ್ಥಕಾರಿ, ಲೋಕವಿಮುಖರಾಗಿ ಕಠೋರವಾದ ಕಾಯಕ್ಲೇಶ ತಂದುಕೊಳ್ಳುವ ದಾರಿ ಅನರ್ಥಕಾರಿ. ಎರಡನ್ನೂ ಬಿಟ್ಟು ಮಧ್ಯಮಾರ್ಗ ಹಿಡಿಯಬೇಕೆಂದು ಬುದ್ಧನ ದೇಶನ. ಈ ಮಧ್ಯಮಾರ್ಗ ಅಷ್ಟಾಂಗಮಾರ್ಗ (ಅಟ್ಠಂಗಿಕೊ ಮಗ್ಗೋ) ಎನ್ನುತ್ತಾರೆ. ಈ ಎಂಟು ಅಂಗಗಳು ಯಾವುವೆಂದರೆ ಸರಿಯಾದ ದೃಷ್ಟಿ (ಸಮ್ಮಾದಿಟ್ಠಿ), ಸರಿಯಾದ ಸಂಕಲ್ಪ (ಸಮ್ಮಾಸಂಕಪ್ಪ), ಸರಿಯಾದ ಮಾತು (ಸಮ್ಮಾವಾಚಾ), ಸರಿಯಾದ ಕೆಲಸ (ಸಮ್ಮಾಕಮ್ಮಂತ), ಸರಿಯಾದ ಜೀವನೋಪಾಯ (ಸಮ್ಮಾ ಅಜೀವೋ) ಸರಿಯಾದ ವ್ಯಾಯಾಮ (ಸಮ್ಮಾವಾಯಾಮೋ), ಸರಿಯಾದಸ್ಮøತಿ (ಸಮ್ಮಾಸತಿ), ಸರಿಯಾದ ಸಮಾಧಿ (ಸಮ್ಮಾ ಸಮಾಧಿ), ದುಃಖ, ದುಃಖ ಸಮುದಯ, ದುಃಖನಿರೋಧ. ಮಾರ್ಗ ಈ ನಾಲ್ಕು ಸತ್ಯಗಳನ್ನು ತಿಳಿಯುವುದೇ ದೃಷ್ಟಿ. ಕಾಮಗಳಿಂದ ವಿಮುಖರಾಗುವುದು, ದ್ವೇಷಮಾಡದಿರುವುದು ಅಥವಾ ಮೈತ್ರಿ, ಹಿಂಸೆ ಮಾಡದಿರುವುದು ಇವು ತ್ರಿವಿಧಸಂಕಲ್ಪ. ಸುಳ್ಳು ಪೈಶುನ್ಯ, ಮನಸ್ಸು ನೋಯಿಸುವ ಮಾತು, ವ್ಯರ್ಥಾಲಾಪ ಇವುಗಳಿಂದ ದೂರಾಗಿರುವುದು ಸರಿಯಾದ ಮಾತು. ಕೊಲ್ಲದಿರುವುದು, ಕಳುವು ಮಾಡದಿರುವುದು, ಕಾಮಿಯಾಗದಿರುವುದು ಇವು ಸರಿಯಾದ ಕೆಲಸ. ಕೆಟ್ಟಕೆಲಸದಿಂದ ಕಷ್ಟಪಡದೆ, ಮೋಸದಿಂದ ಧನಾರ್ಜನೆ ಮಾಡದೆ ಇರುವುದು ಜೀವನೋಪಾಯ. ಏಳದಿರುವ ಪಾಪಪ್ರವೃತ್ತಿಗಳನ್ನು ಏಳದಂತೆಮಾಡುವುದು (ಸಂವರ). ಎದ್ದ ಪಾಪಪ್ರವೃತ್ತಿಗಳನ್ನು ಹೋಗಲಾಡಿಸುವುದು (ಪಹಾನ). ಏಳದಿರುವ ಕುಶಲ ಪ್ರವೃತ್ತಿಗಳು ಏಳುವಂತೆ ಮಾಡುವುದು (ಭಾವನ). ಎದ್ದ ಕುಶಲಪ್ರವೃತ್ತಿಗಳು ಉಳಿಯುವಂತೆ ಮಾಡುವುದು (ಅನುರಕ್ಖನ) ಈ ನಾಲ್ಕು ವ್ಯಾಯಾಮಗಳು ಸರಿಯಾದ ಸ್ಮøತಿಯೆಂದರೆ ದೇಹ, ವೇದನಾ, ಚಿತ್ತ. ತೈತಸಿಕ ಪ್ರಸಂಗಗಳನ್ನು ಎಚ್ಚರದಿಂದ ಗ್ರಹಿಸುವ ಧ್ಯಾನವಿಧಾನಗಳು. ಈ ಧ್ಯಾನದ ಫಲವಾಗಿ ನಾಲ್ಕು ಸ್ಥಿತಿಯ ಸಮಾಧಿಗಳು ಒದಗುತ್ತವೆ. ಇವು ಸಮ್ಯಕ್‍ಸಮಾಧಿಯೆನಿಸುತ್ತವೆ. ಇವುಗಳಲ್ಲಿ ದೌಷ್ಟಿಸಂಕಲ್ಪಗಳು ಪ್ರಜ್ಞಾಸ್ಕಂಧಕ್ಕೆ ಸೇರಿದವೆಂದೂ ವಾಚಾ ಕಮ್ಮಂತ ಆ ಜೀವಗಳು ಶೀಲಸ್ಕಂದಕ್ಕೆ ಸೇರಿದವೆಂದೂ. ವ್ಯಾಯಾಮ-ಸ್ಮತಿೃ-ಸಮಾಧಿಗಳು ಸಮಾಧಿಸ್ಕಂಧಕ್ಕೆ ಸೇರಿದವೆಂದೂ ವ್ಯವಹಾರವಿದೆ. 

	ಬೌದ್ಧಧರ್ಮದಲ್ಲಿ ಮುಕ್ತಿ ಪಡೆಯುವುದು ಪುಣ್ಯದ ಪರಿವರ್ತದಿಂದಾಗಲೀ ದೇವರ ಅನುಗ್ರಹದಿಂದಾಗಲೀ ಸಾಧ್ಯವಿಲ್ಲ; ಅಥವಾ ವೈಯಕ್ತಿಕ ಪರಿಣಾಮದ ಫಲವಾಗಿ ಮುಕ್ತಿಸಿದ್ಧವಾಗುವುದಿಲ್ಲ ಎಂಬ ಕಲ್ಪನೆ ಬುದ್ಧನ ಕಾಲಕ್ಕೆ ಪ್ರಚಲಿತವಾಗಿದ್ದಿತು. ಪ್ರತಿ ವ್ಯಕ್ತಿ ತನ್ನ ಬಾಳಿನಲ್ಲಿ ಶೀಲ-ಪ್ರಜ್ಞೆ-ಸಮಾಧಿಗಳನ್ನು ನಿರ್ವಹಿಸಿಕೊಂಡು ಮುಕ್ತಿ ಗಳಿಸಿಕೊಳ್ಳಬೇಕು; ಬುದ್ಧನದು ಗುರುವಿನ ಪಾತ್ರವಷ್ಟೇ ವಿನಾ, ಅವನ ಅನುಗ್ರಹ, ಕರುಣೆ ಮುಕ್ತಿಗೆ ನೆರವಾಗುದೆಂಬ ಕಲ್ಪನೆ ಹೀನಯಾನದವರದು. ಮಹಾಯಾನದವರು ಪುಣ್ಯಪರಿವರ್ತನೆ (ಎಂದರೆ ಒಬ್ಬನ ಪುಣ್ಯವನ್ನು ಬೇರೊಬ್ಬರಿಗೆ ಧಾರೆಯೆರೆಯುವುದು) ಸಾಧ್ಯತೆ ಒಪ್ಪುತ್ತಾರೆ. ಮೊದಲಿಗೆ ಬುದ್ಧ ದೇವತೆಯಲ್ಲ, ಬರಿಯ ಮಾನುಷೀ ಗುರುವಾಗಿದ್ದವ ತಾನೆ? ಅವನ ಮಾತಿನಲ್ಲೇ ಹೇಳುವುದಾದರೆ ವ್ಯಕ್ತಿ ಕಷ್ಟಪಟ್ಟು ಕೆಲಸಮಾಡಬೇಕು. ತಥಾಗತ ಕೇವಲ, ದಾರಿತೋರಿಸುತ್ತಾನಷ್ಟೆ. ಹಳೆಯ ಬೌದ್ಧಧರ್ಮದಲ್ಲಿ ವ್ಯಕ್ತಿಯ ಪ್ರಯತ್ನಕ್ಕೆ, ಸ್ವಾವಲಂಬನೆಗೆ ಹೆಚ್ಚಿನ ಪ್ರಾಶಸ್ತ್ಯ. ಅದರಲ್ಲಿ ಭಗವಂತನ ಅನುಗ್ರಹ, ಗುರುವಿನ ಪ್ರಸಾದ, ಪುಣ್ಯವಂತರ ನೆರವಿನ ಮಾತಿಲ್ಲ. ಈ ವಿಚಾರಗಳು ಮಹಾಯಾನದ ಬೌದ್ಧರಲ್ಲಿ ಮೂಡಿಬಂದಿತಾದರೂ ಪ್ರಯತ್ನದ ಪ್ರಾಶಸ್ತ್ಯ ಕಮ್ಮಿಯಾಗಲಿಲ್ಲ.
ಮುಮುಕ್ಷುವಾದ ಮನುಷ್ಯ ವ್ಯವಹಾರದ ಆಕರ್ಷಣೆಯನ್ನು ತಗ್ಗಿಸಿ. ಐಹಿಕ ಸುಖದ ಆಲಂಬನವನ್ನು ಇಂಗಿಸಿ ನಿಷ್ಠೆಯಿಂದ ಉದ್ಯಮಮಾಡಬೇಕು. ಲೌಕಿಕ ಪ್ರಸಕ್ತಿಯಲ್ಲಿ ಮುಳುಗಿದ ಮನುಷ್ಯ ಸಾಧಕನಾಗುವುದು ಸಾಧ್ಯವಿಲ್ಲ. ವ್ಯವಹಾರದ ಅಗತ್ಯವನ್ನು ಬಹುಮಟ್ಟಿಗೆ ಇಳಿಸಿಕೊಳ್ಳಬೇಕೆಂದು ಬುದ್ಧನ ಆಗ್ರಹ. ಅಪ್ಸಕಿಚ್ಚ (ಕಮ್ಮಿ ಕೆಲಸವಿರುವವನಾದರೆ ಧ್ಯಾನಾದಿಗಳನ್ನು ಮಾಡಲು ಸಾಧ್ಯವಾಗುವುದು. ಈ ದೃಷ್ಟಿಯಿಂದ ಬುದ್ಧಾತುರದಲ್ಲಿ ಓಡುತ್ತಿರುವ ಮಂದಿಯ ಮಧ್ಯೆ ಆತುರವಿಲ್ಲದೆ ಇರೋಣ, ಸುಖವಾಗಿ ಬಾಳೋಣ (ಸುಸುಖಂಬತ ಜೀವಾಮ, ಆತುರೇಸು ಅನಾತುರಾ) ಎಂದು ಹೇಳಿದ್ದು. ಬೌದ್ಧಧರ್ಮದ ಪ್ರಾಚೀನ ನಿಲವಿನಲ್ಲಿ ಮನುಷ್ಯ ಮನೆಯಲ್ಲಿ ಸಂಸಾರಿಯಾಗಿದ್ದುಕೊಂಡು ಮುಕ್ತಿಗೆ ಶ್ರಮಿಸುವುದು ಸಾಧ್ಯವಿಲ್ಲ; ಮನೆಬಿಟ್ಟು ಮನೆಯಿಲ್ಲದ ಪರಿವ್ರಾಜಕನಾದ (ಅನಗಾರಿಯ-ಪಬ್ಬಜಿಕ) ಭಿಕ್ಷುವಾದರೆ ಇದು ಸಾಧ್ಯ. ಭಿಕ್ಷು ಹಂಸವಾದರೆ, ಗೃಹಸ್ಥ ಕಾಗೆ. ಮನೆಯವಾಸ ಧ್ಯಾನಕ್ಕೆ ಅಡ್ಡಿ: ಅದು ಕೊಳೆಯ ಗೂಡು. ಹೀಗಾಗಿ ಬೌದ್ಧಸಮಾಜದಲ್ಲಿ ಭಿಕ್ಷುಗಳಿಗೆ ಹೆಚ್ಚಿನ ಸ್ಥಾನಮಾನ ದೊರಕಿತು. ಮೊದಲಿಗೆ ಬೌದ್ಧರೆಂದರೆ ಭಿಕ್ಷುಗಳೇ ಆಗಿದ್ದರು. ಸಾಮಾನ್ಯ ಗೃಹಸ್ಥ ಕೇವಲ ಈ ಒಲವಿನಿಂದ ವಿಶೇಷವಾದ ಪ್ರಯೋಜನವಿರಲಿಲ್ಲ. ಗೃಹಸ್ಥ ಕೇವಲ ಉಪಾಸಕ, ಭಿಕ್ಷು ಶ್ರವಣ. ಬುದ್ಧನ ಕಾಲದಲ್ಲಿ ಮುಕ್ತಿಯನ್ನರಸಿ, ದುಃಖದ ಅಂತ್ಯವನ್ನು ಬಯಸಿ ಬಂದವರನ್ನೆಲ್ಲ ಬಾ ಭಿಕ್ಷು, ಧರ್ಮ ಸ್ವಾಖ್ಯಾತವಾಗಿದೆ, ಎಲ್ಲ ದುಃಖವನ್ನು ಕೊನೆಗಾಣಿಸಲು ಬ್ರಹ್ಮಚರ್ಯೆ ನಡೆಸು (ಏಹಿ ಭಿಕ್ಖೂ ಸ್ವಾಕ್ಖಾತೋ ಧಮ್ಮೋ ಚರಥ ಬ್ರಹ್ಮ ಚರಿಯಂ ಸಮ್ಮಾ ದುಕ್ಖಸ ಅಂತಕಿರಿಯಾಯ) ಎಂಬ ಮಾತಿನಿಂದ ಸಂಘಕ್ಕೆ ಸೇರಿಸಿಕೊಳ್ಳುತ್ತಿದ್ದರು. ಈ ಕರೆಯಿಂದಲೇ ಗೃಹಸ್ಥ ಭಿಕ್ಷುವಾಗಿ ಮನೆಯಿಂದ ಹೊರಟು ಸಂಘದಲ್ಲಿ ನಿಲ್ಲುತ್ತಿದ್ದ. ಇದಕ್ಕೆ ಪಬ್ಬಜ್ಜಾ (ಪ್ರವ್ರಜ್ಯ) ಎಂದರೆ ಸಂನ್ಯಾಸ ದೀಕ್ಷೆ ಎಂದು ಹೆಸರು. ಕಾಲಕ್ರಮದಲ್ಲಿ ಸಂಘಪ್ರವೇಶ ಇಷ್ಟು ಸರಳವಾಗಿರದೆ, ಪ್ರವೇಶದ ಅನಂತರ ಸಂಘದಲ್ಲಿ ಸ್ವೀಕಾರದ ವಿಧಿ ಒದಗಿಬಂದಿತು. ಈ ವಿಧಿಗೆ ಉಪಸಂಪದಾ ಅಥವಾ ಸೇರುವುದು ಎನ್ನುತ್ತಾರೆ. ಪ್ರವೇಶವಾದೊಡನೆ ಅವನು ಶ್ರಾಮಣೇರ; ಸ್ವೀಕಾರವಾದ ಅನಂತರ ಶ್ರಮಣನೆಂದರೆ ಉದ್ಯಮಶೀಲ, ಕಷ್ಟಪಡುವವ, ಕೆಲಸಗಾರ. ಕೆಲಸವೆಂದರೆ ಮುಕ್ತಿಯ ಕೆಲಸ. 
ಗೃಹಸ್ಥರಿಗೆ ಬೌದ್ಧಧರ್ಮದಲ್ಲಿ ಪಂಚಶೀಲಗಳಾದರೆ ಶ್ರಮಣರಿಗೆ ದಶಶೀಲ. ಪಂಚಶೀಲ (ಕೊಲ್ಲದಿರುವುದು, ಮಧ್ಯ ಕಳವುಮಾಡದಿರುವುದು, ಸುಳ್ಳಾಡದಿರುವುದು, ಕಾಮಿಯಾಗದಿರುವುದು, ಮದ್ಯ ಕುಡಿಯದಿರುವುದು,) ಸಾಮಾನ್ಯ ಧರ್ಮ. ಇದರಲ್ಲಿ ಬೌದ್ಧ ಸಂಪ್ರದಾಯದ ವಿವರಗಳು ಏನೂ ಇಲ್ಲ: ಈ ನೀತಿ ನಿಯಮಗಳು ಎಲ್ಲ ಧರ್ಮದಲ್ಲಿಯೂ ಮಾನ್ಯವಾದವೇ, ಯಾವ ಸದ್ಗøಹಸ್ಥನಾಗಲೀ ಅನುಸರಿಸಬೇಕಾದವೇ. ಇವನ್ನು ಅನುಸರಿಸಿದ ಮಾತ್ರಕ್ಕೆ ಆತ ಬೌದ್ಧನಾಗಲಾರ. ಭಿಕ್ಷುಗಳಿಗೆ ಸಂನ್ಯಾಸ ಸ್ಥಿತಿಗೆ ಸಂಬಂಧಿಸಿದ ಶೀಲಗಳನ್ನು ವಿಧಿಸಿದ್ದಾರೆ. ಸಂಗೀತ, ನೃತ್ಯ, ವಾದ್ಯಗಳಿಗೆ ಮನಸ್ಸುಗೊಂಡದಿರುವುದು, ಬೆಳ್ಳಿಬಂಗಾರವನ್ನು ಮುಟ್ಟದಿರುವುದು, ಗಂಧಮಾಲ್ಯಾದಿಗಳನ್ನು ಸ್ವೀಕರಿಸದಿರುವುದು ಇತ್ಯಾದಿ. ಬೌದ್ಧ ಸಂನ್ಯಾಸವಿಧಿ ಆ ಕಾಲಕ್ಕೆ ಪ್ರಚಲಿತವಾಗಿದ್ದ ಸಂನ್ಯಾಸದೀಕ್ಷೆಯ ಕ್ರಮವನ್ನೇ ಅನುಸರಿಸಿತು. ಇದರಲ್ಲಿ ಬೌದ್ಧಧರ್ಮದ ವಿವರಗಳ ಪ್ರವೇಶವಿಲ್ಲ. ಆದರೆ ಬೌದ್ಧರ ಸಂಘವಿನಯದಲ್ಲಿ ಧ್ಯಾನಕ್ಕೆ ಪ್ರಾಶಸ್ತ್ಯ ಹೆಚ್ಚು. ಇದೇ ಬೌದ್ಧಧರ್ಮದ ಪ್ರಾಯೋಗಿಕ ನಿಲವು. ಹೀಗೆಂದೇ ಬರ್ಮಾದೇಶದಲ್ಲಿ ಗೃಹಸ್ಥರೂ ವರ್ಷಕ್ಕೊಮ್ಮೆ ವಿಹಾರಗಳಿಗೆ ಹೋಗಿ ಅಲ್ಲಿ ಭಿಕ್ಷುಗಳಂತೆ ಕೆಲಕಾಲ ಇದ್ದು ಧಾನ್ಯಗಳನ್ನು ನಡೆಸಿ ಮರಳಿ ಮನೆಗೆ ಬರುವ ಪದ್ಧತಿಯಿದೆ. ಹಿಂದೂಧರ್ಮದಲ್ಲಿ ಹುಡುಗರಿಗೆ ಉಪನಯನ ಮಾಡುವಂತೆ ಬೌದ್ಧಧರ್ಮದಲ್ಲಿ ಪ್ರವ್ರಜ್ಯದ ನಾಟಕ ನಡೆಸಿ ಹುಡುಗನನ್ನು ಒಂದೆರಡು ದಿನ ವಿಹಾರದಲ್ಲೇ ಬಿಟ್ಟು ಮನೆಗೆ ಮತ್ತೆ ಕರೆತರುತ್ತಾರೆ. ಭಿಕ್ಷುವಾಗುವುದಾದರೇ ಬೌದ್ಧಧರ್ಮವನ್ನು ಸರಿಯಾಗಿ ನಡೆಸಲು ಸಾಧ್ಯ ಎಂಬ ಕಲ್ಪನೆ ಈ ಪದ್ಧತಿಗಳಿಗೆ ಮೂಲ. 

	ಅಷ್ಟಾಂಗಿಕ ಮಾರ್ಗದಲ್ಲಿ ಕಡೆಯ ಮೂರಾದ ವ್ಯಾಯಾಮ. ಸ್ಮøತಿ. ಸಮಾಧಿಗಳು ಬೌದ್ಧಧರ್ಮದ ವೈಶಿಷ್ಟ್ಯ ಎನ್ನಬಹುದು. ನಿರ್ವಾಣದ ಶಾಂತಿ ಪಡೆಯಲು ಬುದ್ದ ಹುಡುಕಿ ಹೇಳಿದ ಮಾರ್ಗದಲ್ಲಿ ಇದೇ ಪ್ರಮುಖ ಅಂಗ. ಉಳಿದ ವಿಚಾರಧಾರೆ ಇದಕ್ಕೆ ಪೋಷಕ ಅಷ್ಟೇ. ಬುದ್ದನ ಕಾಲಕ್ಕೆ ಪ್ರಚಲಿತವಾಗಿದ್ದ ನಲವತ್ತು ನಾಲ್ಕು ದೃಷ್ಟಿಗಳಲ್ಲಿ ಈ ಅಂಗವಿರಲಿಲ್ಲ. ಬುದ್ಧನ ಗುರುಗಳಾಗಿದ್ದ ಆರಾಢ ಕಾಲಾಮ ಮತ್ತು ರುದ್ರಕ ರಾಮಪುತ್ರ ಇವರ ಧರ್ಮವಿನಯಗಳಲ್ಲೂ ಈ ಅಂಗವಿರಲಿಲ್ಲ. ಈ ಕಾರಕವಾದ ಅಂಗವಿಲ್ಲದೆ ಅವೆಲ್ಲ ದೃಷ್ಠಿಕಾಂತಾರ. ದೃಷ್ಟಿ ಸಂಯೋಜನವೆಂದು ಕಂಡುಕೊಂಡ ಬುದ್ಧ ತನ್ನ ಅನುಭವದ ಆಳದಿಂದ ಈ ಮಾರ್ಗ ಸಾಧಿಸಿ ಸಿದ್ಧಿಸಿಕೊಂಡು ಲೋಕಕ್ಕೆ ಪ್ರಕಟಪಡಿಸಿದ. ಈ ಮಾರ್ಗಕ್ಕೆ ಸಮಷ್ಟಿಯಲ್ಲಿ ಭಾವನಾ (ಭೂ ಧಾತುವಿನಿಂದ ಮಾಡುವುದು ಎಂಬರ್ಥದಲ್ಲಿ) ಎನ್ನುತ್ತಾರೆ. ಪ್ರತೀತ್ಯಸಮುತ್ಪಾದದಿಂದ ದುಃಖ ಒದಗಿದಂತೆ ಈ ಮಾರ್ಗದ ಅನುಸರಣೆಯಿಂದ ದುಃಖ ಮರೆಯಾಗಿ ನಿರ್ವಾಣಪ್ರಾಪ್ತವಾಗುತ್ತದೆ. ಪ್ರತೀತ್ಯಸಮುತ್ಪಾದ ಒಂದು ದಾರಿಯಾದರೆ ವಿರುದ್ದವಾದುದು ಉಪನಿಸ್ಸಯಪಚ್ಚಯ ಎನಿಸಿಕೊಳ್ಳುತ್ತದೆ. ಸಂಯುಕ್ತನಿಕಾಯದ ನಿದಾನವಗ್ಗದಲ್ಲಿ ಬುದ್ಧ ಈ ಕ್ರಮವನ್ನು ವಿವರಿಸಿದ್ದಾನೆ. ತ್ರಿಲಕ್ಷಣಗಳನ್ನು (ದುಃಖ. ಅನಿತ್ಯ, ಅನಾತ್ಮ) ಕಂಡು ಮಾರ್ಗದಲ್ಲಿ ಶ್ರದ್ಧೆಯಿಟ್ಟರೆ (ದುಃಖೂ ಪನಿಸಾ ಸದ್ಧಾ) ಆದ್ದರಿಂದ. ಎಂದರೆ ಧ್ಯಾನಗಳನ್ನು ನಡೆಸುವುದರಿಂದ, ಮೋದ (ಪಾಮೋಜ್ಜ) ಒದಗುತ್ತದೆ. ಮೋದ ಅವಲಂಬಿಸಿ ಪ್ರೀತಿ (ಪೀತಿ) ಪ್ರೀತಿ ಅವಲಂಬಿಸಿ ಪ್ರಸ್ರಬ್ದಿ (ಪಸ್ಸದ್ಧಿ). ಪ್ರಸ್ರಬ್ದಿಯಿಂದ ಸುಖ. ಸುಖವನ್ನು ಅವಲಂಬಿಸಿ ಸಮಾಧಿ. ಸಮಾಧಿಯಿಂದ ಯಥಾಭೂತಜ್ಞಾನ ದರ್ಶನ (ಇದನ್ನೇ ವಿಪಸ್ಸನಾಭಾವನೆ ಎನ್ನುತ್ತಾರೆ.) ಯಥಾಭೂತಜ್ಞಾನದರ್ಶನದಿಂದ ನಿರ್ವೇದ (ನಿಬ್ಬಿದಾ), ನಿರ್ವೇದದಿಂದ ವಿರಾಗ. ವಿರಾಗದಿಂದ ವಿಮುಕ್ತಿ. ವಿಮುಕ್ತಿಯಿಂದ ಕ್ಷಯಜ್ಞಾಯ ಒದಗಿ ಕಾಮಾಸ್ರವ. ಭವಾಸ್ರವ. ದೃಷ್ಟ್ಯಶ್ರವ. ಅವಿದ್ಯಾಶ್ರವಗಳು ಕ್ಷಯವಾಗುತ್ತವೆ. ಇದೇ ನಿರ್ವಾಣ.

	ಬೌದ್ಧರು ನಿರ್ವಾಣವನ್ನು ವರ್ಣಿಸುವಾಗ ಉಪನಿಷತ್ತಿನಲ್ಲಿ ಬ್ರಹ್ಮನ ವಿಚಾರವಾಗಿ ಹೇಳಿರುವ ವಿವರಗಳನ್ನೇ ಬಳಸಿಕೊಂಡಿದ್ದಾರೆ. ನಿರ್ವಾಣವೆಂದರೆ ಏನೂ ಇಲ್ಲದುದು, ಇದ್ದುದು ಹೋಗಿ ಇಲ್ಲದಾಗುವುದು ಎಂಬರ್ಥ ರೂಢವಾಗಿದ್ದರೂ ಪಾಳೀ ವಾಙ್ಮಯದಲ್ಲಿ ಈ ಅರ್ಥ ಅಷ್ಟು ಪ್ರಚಲಿತವಾಗಿಲ್ಲ ನಿರ್ವಾಣ ಬ್ರಾಹ್ಮೀಸ್ಥಿತಿಯೆಂಬ ತಾತ್ಪರ್ಯ ಇಲ್ಲಿದೆ. ಶೂನ್ಯವಾದಿಗಳು ನಿರ್ವಾಣದ ವಿಚಾರವಾಗಿ ಸ್ವಲ್ಪ ಗೊಂದಲ ಎಬ್ಬಿಸಿದರು, ನಿಜ. ಆದರೆ ಉದಾನದಲ್ಲಿ ಬುದ್ಧನೇ ಹೇಳಿದ ಮಾತು-“ಅಜಾತವಾದದ್ದು. ಅಭೂತವಾದದ್ದು. ಅಕೃತವಾದದ್ದು. ಅಸಂಸ್ಕøತವಾದದ್ದು ಇದೆ. ಅದಿಲ್ಲದಿದ್ದರೆ ಜಾತವಾದ. ಭೂತವಾದ. ಕೃತವಾದ ಸಂಸ್ಕøತವಾದ ಈ ಪ್ರಪಂಚ ದಾಟುವುದು (ನಿಸ್ಸರಣ) ಹೇಗೆ? ಪಂಚಭೂತಗಳೂ ಇಲ್ಲದೆ, ಲೋಕ-ಪರಲೋಕಗಳೂ ಇಲ್ಲದೆ. ಚಂದ್ರಸೂರ್ಯರೂ ಇಲ್ಲದೆ, ಇರುವ ನೆಲೆಯೊಂದು (ಆಯತನ) ಇದೆ. ಅದಕ್ಕೆ ಬರುವುದು. ಹೋಗುವುದು. ಸ್ಥಿತಿ. ಉತ್ಪತ್ತಿತಗಳನ್ನು ಹೇಳಲಾಗದು. ಅಪ್ರತಿಷ್ಠವಾದ. ಅಪ್ರವರ್ತವಾದ. ನಿರಾಲಂಬವಾದ ಇದೇ ದುಃಖದ ಅಂತ”. ಬುದ್ಧ ಆತ್ಮನನ್ನು ಒಪ್ಪದಿದ್ದರೂ ಈಶ್ವರನನ್ನು ಒಪ್ಪದಿದ್ದರೂ ಈ ಬ್ರಹ್ಮನಿರ್ವಾಣ ಒಪ್ಪಿದ್ದಾನೆ. ಈ ದೃಷ್ಠಿಯಿಂದಲೇ ತನ್ನ ಮಾರ್ಗ ಬ್ರಹ್ಮಚರ್ಯವೆಂದು ವರ್ಣಿಸಿ ತನ್ನ ಶಿಷ್ಯರಿಗೆ ಚರಥ ಬ್ರಹ್ಮಚರಿಯಂ ಎಂಬ ಆದೇಶವನ್ನಿತ್ತ. ಸಂಸಾರಕ್ಕೂ ನಿರ್ವಾಣಕ್ಕೂ ಭೇದ ಹೇಳುತ್ತ ಸಂಸಾರ ಪರ್ಯಾಪ್ತವಾದುದು. ನಿರ್ವಾಣ ಅಪರ್ಯಾಪ್ತವಾದುದು; ಸಂಸಾರ ಮೀರಿಹೋಗಬಹುದು, ಆದರೆ ನಿರ್ವಾಣಕ್ಕೆ ಮೀರಿದುದು ಇಲ್ಲ (ಅನುತ್ತರ); ಸಂಸಾರ ಲೌಕಿಕವಾದದ್ದು. ನಿರ್ವಾಣ ಲೋಕೋತ್ತರವಾದದ್ದು; ಸಂಸಾರಕ್ಕೆ ರೂಪವಿದೆ. ನಿರ್ವಾಣ ಅಪರೂಪ; ಸಂಸಾರ ಸಪ್ರತ್ಯಯ. ನಿರ್ವಾಣ ಅಪ್ರತ್ಯಯ, ಸಂಸಾರ ಭೂತ ಭವಿಷ್ಯದ್ವರ್ತಮಾನಗಳುಳ್ಳದ್ದು. ನಿರ್ವಾಣ ಈ ರೀತಿ ನಿರ್ದೇಶ್ಯವಲ್ಲ (ನಾತೀತಂ ನಾನಾಗತಂ ನ ಪಚ್ಚುಪ್ಪನ್ನಂ). ನಿರ್ವಾಣ ಪಡೆದವ ಉಪಶಾಂತನಾಗುತ್ತಾನೆ. ಸ್ಥಿತಪ್ರಜ್ಞನಾಗಿರುತ್ತಾನೆ. ಶುದ್ಧನಾಗಿರುತ್ತಾನೆ ಎಂಬ ವರ್ಣನೆಯಿದೆ. ಸುತ್ತನಿಪಾತದ ಗುಹಟ್ಠಕಸುತ್ತದಲ್ಲಿ ಸೊಗಸಾದ ಉಪಮೆಯಿದೆ. ಸಮುದ್ರದ ಮಧ್ಯದಲ್ಲಿ ಅಲೆಗಳು ಏಳುವುದಿಲ್ಲ (ಮಜ್ಝೇಯಥಾ ಸಮುದ್ದಸ್ಸ ಊಮಿ ನೋಜಾಯತೇ); ಹೀಗೆಯೇ ಅನೇಜನಾದ ಭಿಕ್ಷು ಸ್ಥಿತಪ್ರಜ್ಞನಾಗಿರುತ್ತಾನೆ. ಸಂಸಾರ ನದಿ (ಸ್ರೋೀತ). ನಿರ್ವಾಣ ಸಮುದ್ರ.

	ನಿರ್ವಾಣಕ್ಕೆ ಚಿತ್ತಶುದ್ಧಿಯೇ ದಾರಿ. ಚಿತ್ತ ಶುದ್ಧವಾಗುವುದು ಸಮಾಧಿಯಿಂದ ಮಾತ್ರ. ಸಮಾಧಿ ಪಡೆಯಲು ನಲವತ್ತು ಅಭ್ಯಾಸಗಳನ್ನು ಬುದ್ಧ ವಚನದಿಂದ ಸಂಗ್ರಹಿಸಿ ಬುದ್ಧಘೋಷಾಚಾರ್ಯ ವಿಶುದ್ಧಿಮಾರ್ಗವೆಂಬ ಪಾಳಿ ಗ್ರಂಥ ರಚಿಸಿದ್ದಾನೆ. ಇವು ಧ್ಯಾನಕ್ಕೆ ಎಡೆಮಾಡಿಕೊಡುವ ಅಭ್ಯಾಸಗಳು. ಭೂಮಿ. ನೀರು. ಬೆಂಕಿ. ಗಾಳಿ. ಬಣ್ಣಗಳನ್ನು ಕಸಿಣಗಳಂತೆ (ಕೃತ್ಸ್ನ) ಗ್ರಹಿಸಿ ಮಾಡುವ ಹತ್ತು ಅಭ್ಯಾಸಗಳು (ಅಸುಭ); ಮೃತದೇಹದ ನಾನಾ ಸ್ಥಿತಿಗಳಲ್ಲಿ ಅನಿತ್ಯತೆ ಕಂಡುಕೊಳ್ಳಲು ಮಾಡುವ ಹತ್ತು ಅಭ್ಯಾಸಗಳು; ಬುದ್ಧ, ಧರ್ಮ, ಸಂಘ, ಶೀಲ, ಮೃತ್ಯು ಮುಂತಾದ ವಿಚಾರ ಕುರಿತು ಮಾಡುವ ಹತ್ತು ಅನುಸ್ಮøತಿಗಳು (ಅನುಸ್ಸತಿ); ಮೈತ್ರೀ, ಕರುಣೆ, ಮುದಿತ, ಉಪೇಕ್ಷೆ ಈ ನಾಲ್ಕು ಬ್ರಹ್ಮ ವಿಹಾರ ಕುರಿತು ಮಾಡುವ ಭಾವನೆಗಳು; ಆಕಾಶ, ವಿಜ್ಞಾನ ಮುಂತಾದ ನಾಲ್ಕು ಅರೂಪ ಕುರಿತು ಮಾಡುವ ಭಾವನೆಗಳು (ಆರುಪ್ಪ); ಆಹಾರದಲ್ಲಿ ಪ್ರತಿಕೂಲ ಸಂಜ್ಞೆ, ಎಲ್ಲ ವಸ್ತುಗಳನ್ನೂ ನಾಲ್ಕು ಧಾತುಗಳಾಗಿ ವಿಶ್ಲೇಷಣೆ ಮಾಡುವುದು (ಚತುಧಾತುವವಟ್ಠಾನ)-ಈ ನಲವತ್ತು ಅಭ್ಯಾಸಗಳಿಗೆ ಒಟ್ಟಾರೆ ಭಾವನೆ ಎನ್ನುತ್ತಾರೆ. ಇದು ಸಮಾಧಿ ಕರ್ಮವೆಂದು ವ್ಯವಹಾರವಿದೆ. ಈ ಕರ್ಮಗಳನ್ನು ಮಾಡಲು ನೆರವಾಗುವ ವಿವರಗಳಿಗೆ ಕರ್ಮಸ್ಥಾನವೆಂದು (ಕಮ್ಮಟ್ಠಾನ) ಹೆಸರು. ಮನಸ್ಸು ಸಾಮಾನ್ಯವಾಗಿ ಬೂದಿಯಂತೆ ಹಾರಾಡುತ್ತದೆ. ಬೂದಿಯ ಮೇಲೆ ನೀರನ್ನು ಸುರಿದರೆ ಬೂದಿ ಹಾರದೆ ನಿಲ್ಲುವಂತೆ ಮನಸ್ಸನ್ನು ಕರ್ಮಸ್ಥಾನದಲ್ಲಿ ಮೂಡಿಸಿದರೆ ಏಕಾಗ್ರತೆ ಬರುತ್ತದೆ. ಚಿತ್ತದ ಏಕಾಗ್ರತೆಗೆ ಸಮಾಧಿ ಎಂದು ಹೆಸರು (ಸಮ್ಮಾ ಅಧೀಯತಿ). ಏಕಾಗ್ರತೆಯಿಂದ ಉಪಶಮನ ಒದಗುವುದರಿಂದ ಸಮಾಧಿಗೆ ಶಮಥಭಾವನೆಯೆಂದೂ ಪ್ರಜ್ಞೆಗೆ ವಿಪಶ್ಯನಾಭಾವನೆಯೆಂದೂ ಪರ್ಯಾಯಪದಗಳು ಪ್ರವೃತ್ತವಾಗಿವೆ. ವ್ಯವಹಾರದಲ್ಲಿ ಸ್ಮøತಿಪ್ರಸ್ಥಾನ (ಸತಿಷಟ್ಠಾನ) ಎಂದು ಭಾವನೆಗಳನ್ನು ನಿರ್ದೇಶಿಸುತ್ತಾರೆ. 

	ಬೌದ್ಧ ಧರ್ಮದಲ್ಲಿ ದೇವತಾ ಪ್ರಾರ್ಥನೆ. ಹವನ ಹೋಮಗಳಿಲ್ಲದಿರುವುದರಿಂದ ಈ ಭಾವನೆಯೇ ಮುಖ್ಯ ಕ್ರಿಯಾಂಗವಾಗಿದೆ. ಬೌದ್ಧ ವಿಹಾರಗಳಲ್ಲಿ ಭಾವನೆಗೇ ಹೆಚ್ಚು ಪ್ರಾಶಸ್ತ್ಯ. ಚಂಕಮಭಾವನಾ. ಕಸಿಣಭಾವನಾ, ಮೆತ್ತಾಭಾವನಾ. ಆನಾಪಾನಸತಿಭಾವನಾ-ಇವು ಪ್ರಚಲಿತವಾಗಿರುವ ಧ್ಯಾನವಿಧಾನಗಳು. ಬರ್ಮಾ ದೇಶದಲ್ಲೂ ಸಿಂಹಳದ್ವೀಪದಲ್ಲೂ ಈ ಧ್ಯಾನಗಳು ಬೆಳೆದು ವ್ಯವಸ್ಥಿತವಾಗಿವೆ.

	ಮೊದಲಿಗೆ ಬೌದ್ಧರು ಸ್ತೂಪಗಳ ಸಂದರ್ಶನ ಮಾಡಿಬರುವುದು ಪುಣ್ಯ ಕೆಲಸವೆಂದು ಬಗೆದಿದ್ದರು. ಸ್ತೂಪವೆಂದರೆ ಬುದ್ಧನ ಅಥವಾ ಅವನ ಶಿಷ್ಯರ ಅವಶೇಷಗಳನ್ನು (ಧಾತು) ಒಳಗಿಟ್ಟ ಮೇಲೆ ಕಟ್ಟಿಸಿದ ಕಟ್ಟಡ. ಸ್ತೂಪಕ್ಕೆ ಧಾತುಗರ್ಭವೆಂದೂ ಹೆಸರಿದೆ. ಸ್ತೂಪ ಎಂದಾಗ ಅವಶೇಷ ಇರಲೇಬೇಕೆಂಬ ನಿಯಮ ಇಲ್ಲ. ಕೆಲವೊಮ್ಮೆ ಪವಿತ್ರ ಸ್ಥಳ ನಿರ್ದೇಶನಕ್ಕಾಗಿ ಸ್ತೂಪ ನಿರ್ಮಿಸುತ್ತಾರೆ. ನಿದರ್ಶನಕ್ಕೆ ವಾರಾಣಸಿಯಲ್ಲಿ ಬುದ್ಧ ಧರ್ಮಚಕ್ರ ಪ್ರವರ್ತನಮಾಡಿದ ಸ್ಥಳದಲ್ಲಿ ಧಾಮೇಕ್ ಸ್ತೂಪವಿದೆ: ಅದರಲ್ಲಿ ಅವಶೇಷವೇನೂ ಇಲ್ಲ. ಆದರೆ ಬೌದ್ಧರಿಗೆ ಸ್ತೂಪ ಸಂದರ್ಶನ ವ್ಯವಹಾರದಲ್ಲಿ ಪ್ರಿಯವಾದುದು. ಅಶೋಕ ಬುದ್ಧನ ಜೀವಿತಕ್ಕೆ ಸಂಬಂಧಿಸಿದ ಸ್ಥಳಗಳನ್ನೆಲ್ಲ ಸಂದರ್ಶಿಸಿ, ಅಲ್ಲಲ್ಲಿ ಸ್ತೂಪ ಕಟ್ಟಿಸಿ ಶಾಸನ ಬರೆಸಿಟ್ಟ. ಈ ಸ್ತೂಪಗಳನ್ನು ನೋಡಲೆಂದೇ ಚೀನೀ ಯಾತ್ರಿಕರೂ ಟಿಬೆಟನ್ ಯಾತ್ರಿಕರೂ ಭಾರತದೇಶಕ್ಕೆ ಬರುತ್ತಿದ್ದರು. ನಿತ್ಯಜೀವನದಲ್ಲಿ ಬೌದ್ಧರು ಬುದ್ಧವಂದನ ಮಾಡಿ ಶಿಕ್ಷಾಪದಗಳನ್ನು ಪಠಿಸಿ. ಅವಕಾಶವಿದ್ದರೆ ಪ್ರವೃತ್ತಿಯಿದ್ದರೆ ಧ್ಯಾನ ಮಾಡುತ್ತಾರೆ. ನೈಮಿತ್ತಿಕವಾಗಿ ಬುದ್ಧ ಹುಟ್ಟಿದ. ಸಂಬೋಧಿ ಕಂಡ, ಪರಿನಿರ್ವಾಣ ಪಡೆದ ದಿನವಾದ ವೈಶಾಖಪೂರ್ಣಿಮೆಯನ್ನು ಉತ್ಸವವಾಗಿ ಆಚರಿಸುತ್ತಾರೆ. ವಿಹಾರಗಳಿಗೆ ಹೋಗಿ ಭಿಕ್ಷುಗಳನ್ನು ಸಂದರ್ಶಿಸುವುದು. ಸ್ತೂಪಗಳಿಗೆ ಹೋಗಿಬರುವುದು. ಅವರಲ್ಲಿ ಪದ್ಧತಿಯಿದೆ. ಇಷ್ಟನ್ನು ಬಿಟ್ಟರೆ ಬೌದ್ಧರ ಆಚಾರ ವ್ಯವಹಾರಗಳು ಆಯಾ ದೇಶಾಚಾರ, ಕುಲಾಚಾರದ ಸಂಪ್ರದಾಯದಂತೆಯೇ ಇರುತ್ತವೆ.

	ಮೇಲೆ ಹೇಳಿದ ಧರ್ಮವಿವರಗಳು ಬೌದ್ಧಮತದ ಎಲ್ಲ ಶಾಖೆಗಳಿಗೂ ಸಾಮಾನ್ಯವಾದುವು. ಕಾಲಕ್ರಮದಲ್ಲಿ ಹಲವಾರು ಮತಪ್ರಭೇದಗಳು ಕಾಣಿಸಿಕೊಂಡುವು. ಬುದ್ಧ ತೀರಿಕೊಂಡ ಇನ್ನೂರು ವರ್ಷಗಳ ಅನಂತರ ಥೇರವಾದ (ಸ್ಥವಿರವಾದ) ಎಂಬ ಪ್ರಾಚೀನ ಶಾಖೆಯೊಂದಿಗೆ ಮಥುರಾ, ಗಾಂಧಾರ, ಕಾಶ್ಮೀರಗಳಲ್ಲಿ ಸರ್ವಾಸ್ತಿವಾದ ಮತ್ತು ಮಗಧದಲ್ಲಿ ಮಹಾಸಾಂಘಿಕ ಮತ ಕವಲೊಡೆದುವು. ಮಹಾಸಾಂಘಿಕ ಮತದಿಂದ ಮಹಾಯಾನ ಪಂಥ ಪ್ರವರ್ಶಿತವಾಗಿ ಹಳೆಯ ಹೀನಯಾನಕ್ಕಿಂತ ವಿಭಿನ್ನವಾದ ವಿವರಗಳು ಮೂಡಿಬಂದುವು. ಕ್ರಿ.ಶ. 150ರ ಸುಮಾರಿಗೆ ನಾಗಾರ್ಜುನನಿಂದ ಮಾಧ್ಯಮಿಕ ಪಂಥವೂ 400ರಲ್ಲಿ ಅಸಂಗನಿಂದ ಯೋಗಾಚಾರ ಪಂಥವೂ ಪ್ರವರ್ತಿತವಾದುವು. 500ರ ಸುಮಾರಿಗೆ ತಂತ್ರದ ಪ್ರಭಾವದಿಂದ ತಾಂತ್ರಿಕ ಬೌದ್ಧ ಪಂಥ ಬೆಳೆಯಿತು. ಈ ವೇಳೆಗೆ ಬೌದ್ಧಧರ್ಮ ಭಾರತದಾಚೆ ಹರಡಲು ಮೊದಲಾಗಿ ಸಿಂಹಳ, ಬರ್ಮ, ಸಯಾಮ್, ಸುಮಾತ್ರಾ, ಜಾವಾ, ಜಪಾನ್, ಕೊರಿಯ, ಚೀನ, ಇಂಡೋಚೀನ, ಟಿಬೆಟ್, ನೇಪಾಳಗಳಲ್ಲಿ ಬೇರೂರಿತು. ಹೀಗೆ ಪ್ರಗತಿಯ ಪಥದಲ್ಲಿ ಹಲವಾರು ಹೊಸ ಹೊಸ ವಿವರಗಳು ಸೇರಿಕೊಂಡು ಬಂದು ಬೌದ್ಧರ ಆಚಾರವ್ಯವಹಾರಗಳೂ ಬದಲಾದುವು. ಮಹಾಯಾನದ ಪ್ರಭಾವದಿಂದ ಬುದ್ಧ ಗುರುವೆಂಬ ಕಲ್ಪನೆ ಜಾರಿ ದೇವಾದಿದೇವನೆಂಬ ಕಲ್ಪನೆ ಮೂಡಿತು. ಧ್ಯಾನಕ್ಕಿಂತ ಬುದ್ಧ ಭಕ್ತಿಯೇ ಹೆಚ್ಚು ಫಲಪ್ರದವೆಂದು ಜನ ನಂಬತೊಡಗಿದರು. ಸ್ತೂಪಗಳ ಜೊತೆಗೆ ದೇವಾಲಯಗಳು ಬೆಳೆದವು. ಬುದ್ಧನೊಂದಿಗೆ ಬೋಧಿಸತ್ತ್ವರು ಬಂದರು. ಸಂಬೋಧಿಯ ಅರ್ಥಕ್ಕಿಂತ ಬುದ್ಧನ ಕರುಣೆ ಪ್ರಮುಖವಾಯಿತು. ಬೌದ್ಧಧರ್ಮ ಆರಂಭದಲ್ಲಿ ಅನೀಶ್ವರವಾದವಾದರೂ ಕಾಲಕ್ರಮದಲ್ಲಿ ಅದರ ವ್ಯಾಪ್ತಿಯೊಳಗೆ ನೂರಾರು ದೇವತೆಗಳು ಸೇರಿದರು-ಅಮಿತಾಭ. ಅಕ್ಷೋಭ್ಯಸ ಮಂಜುಶ್ರೀ, ತಾರಾಭಗವತೀ, ಸಮಂತಭದ್ರ ಮುಂತಾದ ದೇವತೆಗಳು ಹಿಂದೂ ಮತದ ಗರ್ಭದಿಂದ ಹೊರಹೊರಟವರೇ. ನಿರ್ವಾಣದ ಅನಿರ್ವಾಚ್ಯಲಕ್ಷಣ ಸಾಮಾನ್ಯ ಜನರಿಗೆ ಹಿಡಿಸಿದೆ. ಅವರ ಮನಸ್ಸಮಾಧಾನಕ್ಕೆಂದು ಸುಖಾವತೀವ್ಯೂಹವೆಂಬ ಸ್ವರ್ಗ ಸೃಷ್ಟಿಯಾಯಿತು. ಧ್ಯಾನದಿಂದ ಚಿತ್ತವಿಶುದ್ದಿ ಮಾಡಿಕೊಳ್ಳುವ ಕಷ್ಟಕ್ಕಿಂತ ಸುಖವಾಗಿ ಈಶ್ವರ ಕರುಣೆಯನ್ನು ಭಕ್ತಿಯ ಮೂಲಕ ಸಂಪಾದಿಸುವ ಪ್ರಯತ್ನ ಮೊದಲಿಟ್ಟಿತು. ಮುಂದಿನ ಯುಗದ ಬೌದ್ಧರು ನಮೋಮಿತಾ ಭಾಯ ಜಿನಾಯ ತೇ ಮುನೇ; ಸುಖಾವತೀಂ ಯಾಮಿ ಚ ತೇ ನು ಕಂಪಯಾ ಎಂದು ಪ್ರಾರ್ಥಿಸತೊಡಗಿದರು. ಮಂಡಲಗಳ ಪೂಜೆ, ಪ್ರಣಿಧಿ, ತಾಂತ್ರಿಕ ಕ್ರಿಯೆಗಳು, ಪಂಚಮಕಾರಗಳು, ಬುದ್ಧನಿಗೆ ಷೋಡಶೋಪಚಾರ ಪೂಜೆ ಇವೆಲ್ಲ ಬೌದ್ಧ ಧರ್ಮದ ವಲಯದೊಳಗೆ ಸೇರಿಬಂದುವು.			
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ